ಬೆಂಗಾಲೀ -
ಬಂಗಾಲದಲ್ಲಿ 1868ರಲ್ಲಿ ಪ್ರಾರಂಭವಾದ ಪತ್ರಿಕೆ. ಇದರ ಸ್ಥಾಪಕ ಗಿರೀಶಚಂದ್ರ ಘೋಷ್. ಆರ್ಥಿಕ ಸಂಕಷ್ಟದಿಂದಾಗಿ ಮಾಲೀಕರು ಇದನ್ನು ಬಜಾರಾಮ್ ಚಟರ್ಜಿ ಅವರಿಗೆ ಮಾರಿಬಿಟ್ಟರು. ಅವರಿಗೂ ಇದನ್ನು ನಡೆಸಲಾಗಲಿಲ್ಲ. ಆಗ ಮುಂಬಂದ ಸುರೇಂದ್ರನಾಥ ಬ್ಯಾನರ್ಜಿ ಪತ್ರಿಕೆಯನ್ನು ಪಡೆದುಕೊಂಡು (1879) ಇಂಡಿಯನ್ ಅಸೋಸಿಯೇಷನ್ ಸಂಸ್ಥೆಯ ನೆರವು ಕೋರಿದರು. ಆದರೆ ಸಂಸ್ಥೆ ಆರ್ಥಿಕ ಸಹಾಯ ನೀಡಲು ಒಪ್ಪಲಿಲ್ಲ. ಧೃತಿಗೆಡದ ಬ್ಯಾನರ್ಜಿ ಮತ್ತು ಅವರ ಒಬ್ಬ ಸ್ನೇಹಿತ ಸತತವಾಗಿ ಕೆಲಸ ಮಾಡಿ ಪತ್ರಿಕೆಯನ್ನು ನಿಯತವಾಗಿ ಪ್ರತಿ ಶನಿವಾರ ಹೊರ ತರುತ್ತಿದ್ದರು. ಬೆಂಗಾಲೀ ಪತ್ರಿಕೆ ತನ್ನದೇ ಆದ ಸ್ವತಂತ್ರ ಧೋರಣೆ ಅನುಸರಿಸಿತು. 

	ಭಾರತೀಯ ಭಾಷಾ ಪತ್ರಿಕೋದ್ಯಮವನ್ನು ಬಗ್ಗು ಬಡಿಯಲು ಬ್ರಿಟಿಷ್ ಆಡಳಿತ ಜಾರಿಗೊಳಿಸಿದ 1878ರ ದೇಶೀಯ ಭಾಷಾ ಪತ್ರಿಕಾ ಕಾನೂನನ್ನು ಸುರೇಂದ್ರನಾಥ ಬ್ಯಾನರ್ಜಿಯವರ ಪತ್ರಿಕೆ ಪ್ರಬಲವಾಗಿ ವಿರೋಧಿಸಿತು. ಇದರಿಂದ ಪತ್ರಿಕೆಯ ಜನಪ್ರಿಯತೆ ಹೆಚ್ಚಿತು. ಪತ್ರಿಕೆಯ ಆರ್ಥಿಕ ತೊಂದರೆಗಳೂ ನಿವಾರಣೆ ಆದುವು. ಪ್ರಚೋದನ ಕಾರೀ ಸಂಪಾದಕೀಯವೊಂದನ್ನು ಬರೆದುದಕ್ಕಾಗಿ ಬ್ಯಾನರ್ಜಿಯವರಿಗೆ ಎರಡು ತಿಂಗಳು ಜೈಲುವಾಸ ವಿಧಿಸಲಾಯಿತು. ಅವರ ಬಂಧನದ ವಿರುದ್ಧ ಕಲ್ಕತ್ತಾ ನಗರದಲ್ಲಿ ಭಾರೀ ಹರತಾಳವೇ ನಡೆಯಿತು. ಪ್ರಖ್ಯಾತ ಪತ್ರಕರ್ತ ಕಾಶಿನಾಥ ರೇ ತಮ್ಮ ಪತ್ರಿಕೋದ್ಯಮ ಆರಂಭಿಸಿದ್ದು ಬೆಂಗಾಲೀ ಪತ್ರಿಕೆಯ ಮೂಲಕ. ರಾಯಿಟರ್ ಸುದ್ದಿ ಸಂಸ್ಥೆಯ ಸೇವೆಯನ್ನು 1900 ರಲ್ಲಿ ಪಡೆದ ಮೊತ್ತ ಮೊದಲ ಭಾರತೀಯ ಭಾಷಾ ಪತ್ರಿಕೆ ಇದು. ಅರವಿಂದ ಘೋಷರು ಸಹ ಇದರ ಜೊತೆ 1908ರ ತನಕ ಸಂಬಂಧ ಇರಿಸಿಕೊಂಡಿದ್ದರು. ಭಾರತೀಯ ಮಾಲೀಕತ್ವದ ಪತ್ರಿಕೆಗಳಲ್ಲಿ ರೋಟರಿ ಮುದ್ರಣ ಯಂತ್ರ ಹೊಂದಿದ ಮೊದಲ ಪತ್ರಿಕೆ ಬೆಂಗಾಲೀ. ಹತ್ತೊಂಬತ್ತನೆಯ ಶತಮಾನದಲ್ಲಿ ಬಂಗಾಲದಲ್ಲಿದ್ದವು ಬಹುತೇಕ ವಾರಪತ್ರಿಕೆಗಳು. ಆರಂಭದಲ್ಲಿ ಬೆಂಗಾಲೀ ಸಹ ವಾರಪತ್ರಿಕೆಯಾಗಿದ್ದು ಫೆಬ್ರುವರಿ 1900ರಲ್ಲಿ ದಿನಪತ್ರಿಕೆ ಆಯಿತು. ಬಂಗಾಳದ ವಿಭಜನೆ ವಿರುದ್ಧ ಹೋರಾಡಿದ ಈ ಸಾಹಸಿ ಪತ್ರಿಕೆ ಲಾರ್ಡ್ ಕರ್ಜನ್ನನ ಆಡಳಿತವನ್ನು ನಿರ್ಭೀತಿಯಿಂದ ಟೀಕಿಸಿ ಸರ್ಕಾರದ ಆಗ್ರಹಕ್ಕೆ ಈಡಾಯಿತು. ಬೆಂಗಾಲೀ ಪತ್ರಿಕೆಯ ಸೋದರ ಪತ್ರಿಕೆಯಾಗಿ ಹೊರಟ ದೈನಿಕ ನಾಯಕ್. ಅದರ ಸಂಪಾದಕ ಪಂಚಕಾರೀ ಬ್ಯಾನರ್ಜಿ. 

	ಇಲ್ಬರ್ಟ್ ಶಾಸನದ ವಿರುದ್ಧ ಬೆಂಗಾಲೀ ಪತ್ರಿಕೆ ಧ್ವನಿ ಎತ್ತಿತು. ಕಾಂಗ್ರೆಸ್ಸಿನ ವಿಕಾಸದಲ್ಲಿ ಅದರ ಪಾತ್ರ ಪ್ರಮುಖ. ಅಮೃತ ಬಜಾರ್ ಪತ್ರಿಕಾ ಮತ್ತು ಬೆಂಗಾಲೀ ಒಂದೇ ರಾಷ್ಟ್ರೀಯ ಗುರಿಯನ್ನು ಹೊಂದಿದ್ದರೂ ಆಗಾಗ್ಗೆ ಭಿನ್ನಾಭಿಪ್ರಾಯ ತಳೆಯುತ್ತಿದ್ದುವು. ಅಮೃತ ಬಜಾರ್ ಪತ್ರಿಕೆಯಂತೆ ಇದು ಉಗ್ರಗಾಮಿ ಆಗಿಲ್ಲದೆ ಇದ್ದುದೇ ಕಾರಣವಾಗಿ ಬೆಂಗಾಲೀ ಅವನತಿಯತ್ತ ಕಾಲಿಟ್ಟಿತು. ಪತ್ರಿಕೆಯ ಮಧ್ಯಮಾರ್ಗ ಓದುಗರಿಗೆ ಹಿಡಿಸಲಿಲ್ಲ. ಪೃಥ್ವೀಶ ಚಂದ್ರರೇ ಬೆಂಗಾಲೀ ಪತ್ರಿಕೆಯ ಸಂಪಾದಕರಾದಾಗ ಶ್ರೇಯಸ್ಸಿನ ಛಾಯೆಗಳು ಕಂಡವು. 1930ರಲ್ಲಿ ಪತ್ರಿಕೆ ನಾಗರಿಕ ಅಸಹಕಾರ ಚಳುವಳಿಯನ್ನು ಬೆಂಬಲಿಸಿತು. ಆದರೂ ಸುರೇಂದ್ರನಾಥ ಬ್ಯಾನರ್ಜಿಯವರ ಕಾಲದ ಸುವರ್ಣಕಾಲ ಮತ್ತೆ ಪತ್ರಿಕೆಗೆ ಮರಳಿ ಬರಲಿಲ್ಲ. 					
 (ಕೆ.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ